ದಾಸಯ್ಯ
ಜನಪದ ಸಮಾಜದಲ್ಲಿ ಪುರೋಹಿತ. ನೀವ್ಯಾವೂರು ದಾಸಯ್ಯ ಅನ್ನೋರಿಲ್ಲ ಎಂಬ ಗಾದೆ ಈತನ ಜನಪ್ರಿಯತೆಯನ್ನು ಸೂಚಿಸುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಮನೆಯ ಸೂತಕ ಪಾತಕಗಳನ್ನು ಕಳೆಯಲು, ಮನೆಮಠಗಳನ್ನು ಶುದ್ಧಿ ಮಾಡಲು ಈತ ಬೇಕು. ಜನತೆಗೆ ಮಡಿ ಮೈಲಿಗೆಗಳನ್ನು ಕಲಿಸುವಲ್ಲಿ ತಕ್ಕಮಟ್ಟಿಗೆ ಈತ ಮಾರ್ಗದರ್ಶಕನಾಗುತ್ತಾನೆ. ದಕ್ಷಿಣ ಕರ್ನಾಟಕದ ಬಹುಮಂದಿ ಜನಪದರ ಮನೆಗಳಲ್ಲಿ ನಾಮಕರಣದ ವಿಧಿ ನೆರವೇರಿಸುವವ ಮುನಿಯಪ್ಪ, ಮುತ್ತರಾಯ ಮುಂತಾದ ದೇವರುಗಳ ಪೂಜೆ ಪುರಸ್ಕಾರ ಮಾಡುವವ ಈತನೇ.

ದಾಸಯ್ಯ ಪುರೋಹಿತನಾದರೂ ಬ್ರಾಹ್ಮಣ ಪುರೋಹಿತನ ಎಲ್ಲ ಕಾರ್ಯಗಳನ್ನೂ ನಿರ್ವಹಿಸಲಾರ. ಈತ ಒಂದು ಬಗೆಯ ಶೂದ್ರ ಪುರೋಹಿತ. ಪೌರೋಹಿತ್ಯ ಮಾಡಿದರೂ ಮಂತ್ರ ತಂತ್ರ ಕಲಿತವನಲ್ಲ; ಹರಿಕಾರನಾದರೂ ದಾಸರಂತೆ ಕೀರ್ತನೆ ಹಾಡುವುದಿಲ್ಲ. ಇವರುಗಳೆಲ್ಲ ತಿರುಪತಿ ತಿಮ್ಮಪ್ಪನ ಒಕ್ಕಲಿನವರು. ಇವರಲ್ಲಿ ಅನೇಕ ಜಾತಿಯವರಿರುತ್ತಾರೆ. ಇವರು ತಮ್ಮ ಹಾಗೂ ತಮಗಿಂತ ಮೇಲ್ಜಾತಿಯವರ ಮನೆಯ ಅಡುಗೆಯನ್ನು ಉಂಡು, ದೇವರ ಪರವಾಗಿ ಮೀಸಲು ಕಳೆಯುತ್ತಾರೆ. ಶಂಖ, ಜಾಗಟೆ, ಗಂಟೆ, ಭವನಾಶಿ, ಭಾಂಕಿ, ಗರುಡಗಂಬ, ಆಂಜನೇಯನ ಮೂರ್ತಿಯಿರುವ ಅಂಗೈ ಅಗಲದ ಹಿತ್ತಾಳೆಯ ವಿಗ್ರಹ, ತಲೆಗೊಂದು ಪೇಟ, ಹಣೆಯಲ್ಲಿ ಮೂರು ಗೂಟನಾಮ-ಇವು ದಾಸಯ್ಯನ ಮುಖ್ಯ ಲಕ್ಷಣಗಳು. ಕೆಲವರು ಗರುಡಗಂಬ ಹಿಡಿದು ತಿರುಪೆಗೆ ಬರುತ್ತಾರೆ. ಗರುಡ ಪಕ್ಷಿಯನ್ನು ಸಾಕಿಕೊಂಡು ಅದನ್ನು ಕಂಬದ ಜೊತೆ ತರುವುದೂ ಉಂಟು.  
										(ಎನ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ